Monday, March 24, 2014

ಸ್ಥಳ ಪುರಾಣ

                                          ಸುಪಾರ್ಶ್ವ ಗುಹೆ :
  ಸುಪಾರ್ಶ್ವ ಗುಹೆ
              ಹಿಂದೆ ಕೃತ ಯುಗದಲ್ಲಿ ‘ಸುಪಾರ್ಶ್ವ’ ನೆಂಬ ಚಕ್ರವರ್ತಿಯು ತಪಸ್ಸನ್ನು ಆಚರಿಸಿ ಮೋಕ್ಷ ಹೊಂದುವ ಸಂಕಲ್ಪ ಮಾಡುತ್ತಾನೆ. ತಪಸ್ಸಿಗೆ ಯೋಗ್ಯವಾದ ಸ್ಥಳವನ್ನು ಹುಡುಕುತ್ತಾ ಇರುವಾಗ ಶಿವ ಪ್ರೇರಣೆಯಾಗಿ ಶ್ರೀ ಕ್ಷೇತ್ರ ಕಮಲಶಿಲೆಗೆ ಬರುತ್ತಾನೆ. ಇಲ್ಲಿ ಹುಡುಕುತ್ತಿರುವಾಗ ದಟ್ಟವಾದ ಅರಣ್ಯ ಮಧ್ಯದಲ್ಲಿ ಗಿಡ ಮರ ಬಲ್ಲಿಗಲಿನ್ದಾವೃತವಾದ ಈ ಗುಹೆಯನ್ನು ನೋಡುತ್ತಾನೆ. ದೇವತೆಗಳಿಂದ ನಿರ್ಮಿತವಾಗಿ ರಕ್ಷಿಸಲ್ಪಟ್ಟ ಈ ಗುಹೆಯನ್ನು ಸಮೀಕರಣಮಾಡಿ ತಪಸ್ಸಿಗೆ ಯೋಗ್ಯವಾದ ತಾಣವನ್ನಾಗಿ ಮಾರ್ಪಡಿಸುತ್ತಾನೆ. ಹೀಗೆ ಸುಪಾರ್ಶ್ವ  ರಾಜನಿಂದ ಈ ಗುಹೆಯು ಲೋಕಕ್ಕೆ ಪರಿಚಯವಾದ್ದರಿಂದ ‘ಸುಪಾರ್ಶ್ವ ಗುಹೆ’ ಎಂಬ ಹೆಸರು ಪ್ರಖ್ಯಾತವಾಯಿತು.
ಸಿದ್ಧೇಶ್ವರ
        ಸುಪಾರ್ಶ್ವನು ಅದೇ ಗುಹೆಯಲ್ಲಿ ತಪಸ್ಸನ್ನು ಆಚರಿಸಲು ನಿರ್ಧರಿಸುತ್ತಾನೆ. ತಪಸ್ಸಿಗೆ ಯಾವುದೇ ವಿಘ್ನವಾಗದಂತೆ ಪರಮೇಶ್ವರನನ್ನು ಪ್ರಾರ್ಥಿಸಿ ಶಿವನನ್ನು ಕುರಿತು ಭಕ್ತಿಯಿಂದ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ರಾಜನ ಆಗಾಧ ಭಕ್ತಿಗೆ ಮೆಚ್ಚಿದ ಶಿವನು ಅವನ ತಪಸ್ಸಿಗೆ ಯಾರಿಂದಲೂ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳಲು ತನ್ನ ಗಣಗಳಲ್ಲಿ ಒಬ್ಬನಾದ ಭೈರವನಿಗೆ ಆಜ್ಞೆಮಾಡುತ್ತಾನೆ. ಶಿವನಾಜ್ನೆಯಂತೆ ಗುಹದ್ವಾರದಲ್ಲಿ ಭೈರವನು ಬಂದು ಗುಹೆಯಲ್ಲಿ ತಪಸ್ಸನ್ನು ಆಚರಿಸುವವರಿಗೆ ರಕ್ಷಕನಾಗಿ ನಿಲ್ಲುತ್ತಾನೆ. ಮಹಾದೇವನು ಭೈರವನಿಗೆ ‘ನೀನು ಇಂದಿನಿಂದ ಇಲ್ಲಿಯೇ ನೆಲೆನಿಂತು ಋಷಿಮುನಿಗಳಿಗೆ ರಕ್ಷಕನಾಗಿ ಅವರ ತಪಸ್ಸಿದ್ಧಿಗೆ ಕಾರನಿಕನಾಗಿ ಸಿದ್ಧೇಶ್ವರನಾಗು’ ಎಂದು ಆಜ್ನೆಮಡಿ ಸುಪಾರ್ಶ್ವನ ಎದುರಲ್ಲೇ ಮಾಯಾವಾಗುತ್ತಾನೆ.
         ಸುಪಾರ್ಶ್ವ ರಾಜನು ಅನೇಕ ವರ್ಷಗಳವರೆಗೆ ಗುಹೆಯಲ್ಲಿ ಕಠಿಣವಾದ ತಪಸ್ಸನ್ನು ಮಾಡಿ ಶಿವಸಾಯುಜ್ಯ ಹೊಂದುತ್ತಾನೆ. ಮುಂದೆ ಅನೇಕ ರಾಜಮಹಾರಾಜರು, ಋಷಿ  ಮಹಾಮುನಿಗಳು, ಅಷ್ಟಾಂಗಯೋಗ ನಿರತರಾಗಿ ಶಾಂತ ಮತ್ತು ನಿರ್ಮಲ ಮನಸ್ಸಿಂದ ಇಲ್ಲಿ ತಪವನ್ನಾಚರಿಸಿ ಮೋಕ್ಷ  ಹೊಂದುತ್ತಾರೆ.ಈಗಲೂ ಕೂಡ ಈ ಪವಿತ್ರ ಗುಹೆಯಲ್ಲಿ ಮಹಾತ್ಮರು ಅಂತರ್ಧಾಯರಾಗಿ ತಪೋ ನಿರತರಾಗಿರುತ್ತಾರೆಂದು ಪ್ರತೀತಿ ಇದೆ.

               ಈ ಗುಹೆಯೂ ಶ್ರೀ ಕ್ಷೇತ್ರ ಕಮಲಶಿಲೆಯಿಂದ 2 ಕಿ.ಮಿ. ದೂರದಲ್ಲಿ ಕಮಲಶಿಲೆ-ಹಳ್ಳಿಹೊಳೆ ರಸ್ತೆಯ ಎಡಭಾಗದಲ್ಲಿ ಅರಣ್ಯ ಪ್ರದೇಶದಲ್ಲಿದೆ. ಗುಹದ್ವಾರದಲ್ಲಿ ಸಿದ್ಧೇಶ್ವರ ಭೈರವನ ಮೂರ್ತಿ ಇದೆ. ಸ್ವಲ್ಪ ಮುಂದೆ ವ್ಯಾಘ್ರ ಗುಹೆ(ದೇವಿಯವಾಹನ ಹುಲಿಯವಾಸ ಸ್ಥಳ) ಇದೆ. ಸ್ವಲ್ಪ ಮುಂದೆ ಎಡಕ್ಕೆ ಮೂರು ವಿಭಿನ್ನ ಲಿಂಗಗಳು ಗೋಚರಿಸುತ್ತವೆ. ಕಾಳಿ, ಲಕ್ಷ್ಮೀ, ಸರಸ್ವತಿಯರೆಂಬ ಶಕ್ತಿತ್ರಯಸ್ಟ  ರೂಪಿಣಿಯಾದ ಅದಿಶಕ್ತಿಯ  ಉದ್ಭವ  ಲಿಂಗಗಳು ಎಂದು ಊಹಿಸಲಾಗಿದೆ. ಇಲ್ಲಿಯೇ ಕೆಳಗಿಳಿದಾಗ ‘ಗಂಗೆ, ಗೌರಿ,’ ಯರೆಂಬ ಜೋಡುಕೆರೆಗಳಿವೆ. ಮುಂದೆ ಸಾಗಿದಾಗ ನಾಗನ ಸನ್ನಿದಿ ಇದೆ. ನಾಗರಾಜನು ತಪಸ್ಸು ಮಾಡಿದ ಸ್ಥಳವಾಗಿದ್ದು  ಇಲ್ಲಿಂದ ನಾಗತೀರ್ಥವು ಅಂತರ್ಗಾಮಿಯಾಗಿ ಹರಿಯುತ್ತದೆ. ಈ ನಾಗತೀರ್ಥವು ಮುಂದೆ ಕುಬ್ಜೆಯಲ್ಲಿ ಸಂಗಮವಾಗುತ್ತದೆ. ಕುಬ್ಜಾ ನಾಗತೀರ್ಥ ಸಂಗಮವಾಗುವಲ್ಲಿ ರೈಕ್ವ ಮಹರ್ಷಿಗಳ  ಆಶ್ರಮದಲ್ಲಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಯು  ಲಿಂಗರೂಪಿಯಾಗಿ ಪಾತಾಳದಿಂದ ಆವಿರ್ಭವಿಸಿರುತ್ತಾಳೆ. ಗುಹೆಯ ಮೇಲ್ಗಡೆ ದೇವರ ಹುಲಿಗಳಿಗೆ ಚಳಿ ನಿವೃತ್ತಿಗೆ  ಬೆಂಕಿ (ಅಗ್ಗಿಷ್ಟಿಕೆ) ಹಾಕುವ ಸಂಪ್ರದಾಯವಿದೆ. “ಹುಲಿ ಚಾವಡಿ” ಎಂಬ ಪ್ರತ್ಯೇಕ ಕಟ್ಟಡವಿದೆ. ದೇವೀ ಸಾನಿಧ್ಯದಿಂದಲೂ, ಋಷಿಮುನಿಗಳ ತಪಸ್ಸಿನ ಪ್ರಭಾವದಿಂದಲೂ ಸುಪಾರ್ಶ್ವಗುಹೆಯು ಪರಮಪವಿತ್ರವಾಗಿದೆ.  

No comments:

Post a Comment